
ಅಥರ್ವ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ
ಅಥರ್ವ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ.
ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್.
ಗಜೇಂದ್ರಗಡ ::
ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ತ್ವದ್ದು. ಹೊರಗಿನ ಆಕರ್ಷಣೆಗೆ ಮತ್ತು ಒತ್ತಡಗಳಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಶಿಸ್ತಿನಡಿ ತರಬೇಕಾದರೆ ಕೋಚಿಂಗ್ ಸೆಂಟರ್ ಮತ್ತು ಮನೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅಥರ್ವ ನವೋದಯ ಕೋಚಿಂಗ್ ಸೆಂಟರ್ ಪ್ರಾಚಾರ್ಯ ಡಿ.ಜಿ.ತಾಳಿಕೋಟಿ ಹೇಳಿದರು.
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಅಥರ್ವ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ರವಿವಾರ ನಡೆದ 3,4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳ ಶೈಕ್ಷಣಿಕಾವಧಿಯಲ್ಲಿಯೇ ಪ್ರಮುಖವಾದ ಬುನಾದಿ ಘಟ್ಟ. ಈ ಹೊತ್ತಿನಲ್ಲಿ ಪಾಲಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಒಟ್ಟಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕಾಲಕಾಲಕ್ಕೆ ಬೇಕಾದ ಎಲ್ಲ ಬಗೆಯ ಶೈಕ್ಷಣಿಕ ತರಬೇತಿಗಳನ್ನು ಒಂದೇ ಸೂರಿನಡಿ ನೀಡಿ ಎಲ್ಲಾ ರೀತಿಯ ಶೈಕ್ಷಣಿಕ ಸವಾಲುಗಳನ್ನು ಎದುರಿಸಿ ಗೆಲ್ಲುವಂತೆ ಮಾಡುವುದು ಇಂದಿನ ಶಿಕ್ಷಣದ ಮುಂದಿನ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.
ಅಥರ್ವ ನವೋದಯ ಕೋಚಿಂಗ್ ನ ಆಡಳಿತಾಧಿಕಾರಿ ಸಂಪತ ಆಕಳವಾಡಿ ಮಾತನಾಡಿ,
ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥ ರೀತಿಯಲ್ಲಿ ಎದುರಿಸುವ ಶಿಕ್ಷಣವನ್ನು ಅಥರ್ವ ವಿದ್ಯಾ ಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ. ಈ ರೀತಿಯಾದಾಗ ಮಾತ್ರ ಮಗುವಿನ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದರು.
ಇದೇ ಸಂದರ್ಭಗಳಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್.ರಾಠೋಡ, ಶಿಕ್ಷಕಿ ಮೈತ್ರಾ ಹೂಗಾರ, ಲಕ್ಷ್ಮೀ ಕವಡಿಮಠ, ಎಡ್ವರ್ಡ್, ರಾಜೂ ಸೂರ್ಯವಂಶಿ, ಬಸವರಾಜ ಹುಚ್ಚಯ್ಯನಮಠ, ಎಸ್.ಎಚ್.ಹಟ್ಟಿಮನಿ ಸೇರಿದಂತೆ ಇತರರು ಇದ್ದರು.
***