ರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿ

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಂತರಿಕ ಬಿಕ್ಕಟ್ಟು ಬಗ್ಗೆ ಚರ್ಚೆ

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಮರ ಯಾವ ದಿಕ್ಕಿಗೆ ಹೋಗುತ್ತೋ, ಅದೆಂತಹ ಬಿರುಗಾಳಿ ಎಬ್ಬಿಸುತ್ತೋ ಅನ್ನೋ ಆತಂಕ ಶುರುವಾಗಿದೆ. ಅತ್ತ ನವದೆಹಲಿಯಲ್ಲಿ ಯತ್ನಾಳ್​ ಟೀಂ ಬೀಡುಬಿಟ್ಟಿದ್ದು, ಮುಂದಿನ ರಾಜಕೀಯ ಹಾದಿಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಸುಮಾರು 4 ಗಂಟೆಗಳ ಕಾಲ ನಡೆದ ಕೋರ್​ ಕಮಿಟಿ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆದಿವೆ ಎನ್ನುವ ಮಾಹಿತಿ ಇಲ್ಲಿದೆ.

Share News

ಬೆಂಗಳೂರು: ಒಂದು ಕಡೆ ಯತ್ನಾಳ್​ ದೆಹಲಿಯಲ್ಲಿ ಬೀಡು ಬಿಟ್ಟಿದ್ರೆ, ಇತ್ತ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್​ ಭೇಟಿ ನೀಡಿದ್ದಾರೆ. ಬಿಜೆಪಿ ಸದಸ್ಯತ್ವ ಕಾರ್ಯಕ್ರಮ ಹಿನ್ನಲೆ ರಾಜ್ಯಕ್ಕೆ ಬಂದಿರುವ ತರುಣ್​ ಚುಗ್​ ಇಂದು(ಡಿಸೆಂಬರ್ 03) ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪ್ರಮುಖರ ಸಭೆ ನಡೆಸಿದರು. ಸುಮಾರು 4 ಗಂಟೆಗಳ ಕಾಲ ನಡೆದ ಪ್ರಮುಖರ ಸಭೆಯಲ್ಲಿ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಬಗ್ಗೆಯೇ ಚರ್ಚೆ ಆಗಿದೆ. ತರುಣ್​ ಚುಗ್​ ಎದುರು ಒಂದಿಷ್ಟು ನಾಯಕರು ಯತ್ನಾಳ್ ಹೆಸರೇಳದೇ ದೂರು ದುಮ್ಮಾನ ತೋಡಿಕೊಂಡಿದ್ದಾರೆ. ಗುಂಪು ಎಂದು ಉಲ್ಲೇಖಿಸಿ ಕ್ರಮಕ್ಕೆ ಜಿಲ್ಲಾಧ್ಯಕ್ಷರ ಆಗ್ರಹಿಸಿದ್ದಾರೆ.

ಸಭೆಯಲ್ಲಿ ಆಂತರಿಕ ಬಿಕ್ಕಟ್ಟು ಬಗ್ಗೆ ಮಾತುಕತೆ

ಗುಂಪು ಎಂದು ಉಲ್ಲೇಖಿಸಿ ಕ್ರಮಕ್ಕೆ ಜಿಲ್ಲಾಧ್ಯಕ್ಷರ ಆಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷರನ್ನು ಹೈಕಮಾಂಡ್​ ನಾಯಕರು ನೇಮಿಸಿದ್ದಾರೆ. ಯಾರ್ಯಾರಿಗೆ ವ್ಯತ್ಯಾಸ ಇದೆಯೋ ಅವರು ಕುಳಿತುಕೊಂಡು ಮಾತನಾಡಲಿ. ಮಾಧ್ಯಮದ ಎದುರು ಹೋಗಿ ಪ್ರಚಾರ ತೆಗೆದುಕೊಳ್ಳೋದ್ಯಾಕೆ?. ಬಹಿರಂಗ ಮಾತಿನಿಂದ ಪಕ್ಷಕ್ಕೆ ಸಾಕಷ್ಟು ಮುಜುಗರ ಆಗುತ್ತಿದೆ. ಇದನ್ನ ಸರಿಪಡಿಸಬೇಕು, ಹೀಗೆ ಬಿಟ್ರೆ ಪಕ್ಷಕ್ಕೆ ನಷ್ಟ ಆಗುತ್ತೆ. ಪಕ್ಷ ಸಂಘಟನೆಗೆ ಬೂತ್ ಮಟ್ಟದಲ್ಲೇ ಹೊಡೆತ ಬೀಳುತ್ತದೆ. ರಾಜ್ಯ ನಾಯಕತ್ವದ ವಿರುದ್ಧ ಮಾತಾಡುವುದರಿಂದ ಮುಜುಗರ ಆಗುತ್ತೆ ಎಂದು ತರುಣ್​ ಚುಗ್​ ಎದುರೇ ಒಂದಿಷ್ಟು ನಾಯಕರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕರ ಬೇಸರಕ್ಕೆ ರಿಯಾಕ್ಟ್​ ಮಾಡಿರುವ ತರುಣ್​ ಚುಗ್​ ಇದೆಲ್ಲವನ್ನೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಆರಂಭದಲ್ಲೇ ಭಿನ್ನಮತ ಪ್ರಸ್ತಾಪಿಸಿದ ಡಿವಿಎಸ್

ಸಭೆ ಆರಂಭದಲ್ಲೇ ಪಕ್ಷ ಸಂಘಟನೆಗೆ ಸೀಮಿತವಾದ ವಿಷಯಗಳನ್ನಷ್ಟೇ ಮಾತನಾಡುವಂತೆ ಸೂಚಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಸೂಚಿಸಿದ್ದಾರೆ. ಆದರೂ ಪಕ್ಷದ ಬೆಳವಣಿಗೆ ಬಗ್ಗೆ ಪ್ರಸ್ತಾಪ ಮಾಡಿದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಪಕ್ಷದಲ್ಲಿ ಎರಡು ಗುಂಪುಗಳಾಗಿವೆ, ಪಕ್ಷಕ್ಷೆ ಡ್ಯಾಮೇಜ್ ಆಗುತ್ತಿದೆ. ಯತ್ನಾಳ್ ಟೀಮ್ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯ. ಆದರೆ ಇನ್ನೊಂದು ಟೀಮ್ ರೇಣುಕಾಚಾರ್ಯ ‌ಮತ್ತು ಉಳಿದವರೆಲ್ಲಾ ಪ್ರತ್ಯೇಕ ಸಭೆ ಮಾಡಿದ್ದು ಸರಿಯಲ್ಲ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತರುಣ್ ಚುಗ್ , ಈ ಎಲ್ಲಾ ವಿಚಾರಗಳನ್ನು ‌ನನ್ನೊಂದಿಗೆ ಮಾತನಾಡುವುದು ಬೇಡ ಡಿಸೆಂಬರ್ 7 ರಂದು ರಾಧಾ ಮೋಹನ್ ದಾಸ್ ಬರುತ್ತಾರೆ. ಅವರ ಜೊತೆ ಮಾತನಾಡಿ. ಬೂತ್ ಸಮಿತಿ ನೇಮಕ ವೇಳೆ ಸಹಮತದಿಂದ ಮಾಡಬೇಕು. ಯಾವುದೇ ಸಮಸ್ಯೆಯಾಗಬಾರದು. ಈಗ ಬೂತ್ ಸಮಿತಿಗಳು ಕೆಲವೆಡೆ ಸಮಸ್ಯೆಗಳಿರುವುದನ್ನೂ ಸರಿಪಡಿಸಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.

ಸದಸ್ಯತ್ವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ

ಇನ್ನು ಇದೇ ವೇಳೆ ಜಿಲ್ಲಾ ಘಟಕದ ಅಧ್ಯಕ್ಷರಿಂದ ಬಿಜೆಪಿ ಸದಸ್ಯತ್ವ ಅಭಿಯಾನ ವಿಚಾರವಾಗಿ ವರದಿ ಪಡೆದ ತರುಣ್​ ಚುಗ್​, ಅಭಿಯಾನದ ಉಳಿದ ಪ್ರಗತಿ ಬಗ್ಗೆಯೂ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಡಿಸೆಂಬರ್ 12ರೊಳಗೆ ಸದಸ್ಯತ್ವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ.

ವಿಪಕ್ಷ ನಾಯಕ ಅಶೋಕ್ ಹೇಳಿದ್ದೇನು?

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಅಶೋಕ್, ಪಕ್ಷದ ಸಂಘಟನೆ ವಿಚಾರವಾಗಿ 4 ಗಂಟೆ ಕಾಲ ಸಭೆ ಮಾಡಿದ್ದೇವೆ. ಪಕ್ಷದೊಳಗಿನ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅಸಮಾಧಾನಗಳನ್ನು ಶಮನಗೊಳಿಸುವ ಶಕ್ತಿ ನಮ್ಮ ವರಿಷ್ಠರಿಗಿದೆ. ವಾರದೊಳಗೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಸರಿಪಡಿಸುವಷ್ಟು ಶಕ್ತರಾಗಿದ್ದಾರೆ. ಪಕ್ಷದಲ್ಲಿ ಎಲ್ಲರೂ ಒಟ್ಟಿಗಿದ್ದೇವೆ ಎಂದರು.

ಸಭೆ ಬಳಿಕ ವಿಜಯೇಂದ್ರ ಹೇಳಿದ್ದಿಷ್ಟು

ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮೂವರು ಹಿರಿಯ ನಾಯಕರು 4 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಪಕ್ಷದ ಸಕ್ರಿಯ ಸದಸ್ಯತ್ವ ಮುಂದುವರಿಸುವ ಬಗ್ಗೆ ಚರ್ಚೆ ಆಗಿದೆ. ಬೂತ್ ಸಮಿತಿ, ಮಂಡಲ ಸಮಿತಿ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದ್ದು, ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಸಲಹೆ ನೀಡಿದ್ದಾರೆ. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇವೆ . ಸಂಘಟನಾ ಪರ್ವ ಇಡೀ ದೇಶದಲ್ಲಿ ನಡೆಯುತ್ತಿದೆ. ಅದಕ್ಕೆ ಸೀಮಿತವಾಗಿ ಸಭೆ ನಡೆದಿದೆ. ಜಿಲ್ಲಾಧ್ಯಕ್ಷರು ಯಾವುದೇ ಮನವಿಯನ್ನು ನಮ್ಮ ರಾಷ್ಟ್ರೀಯ ನಾಯಕರಿಗೆ ಕೊಟ್ಟಿಲ್ಲ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರಾಜ್ಯದ ಅಧ್ಯಕ್ಷರನ್ನಾಗಿ ನನ್ನ ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ವಂತ ಶಕ್ತಿ ಅಧಿಕಾರಕ್ಕೆ ಬರಬೇಕು. ಇನ್ನು ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ ಹಾಡಬೇಕು. ಯತ್ನಾಳ್‌ಗೆ ನೋಟಿಸ್ ಕೊಟ್ಟಾಗಿದೆ. ಕೇಂದ್ರ ವರಿಷ್ಠರು ಗಮನಿಸುತ್ತಿದ್ದು, ಶಿಸ್ತು ಕ್ರಮ ಕೈಗೊಳ್ಳಬೇಕಾ ಅಥವಾ ಸುಮ್ಮನೆ ಇರಬೇಕಾ ಎಂದು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button