![](https://janadhwanikannada.com/wp-content/uploads/2025/01/ಶರಣ-ಸಂಗಮ-ಮಠದಲ್ಲಿ-ಹೆಡೆ-ಎತ್ತಿ-ನಿಂತ-ನಾಗರಹಾವು-8-780x470.jpg)
ಸಂಡೂರು ಸೋಲಿನ ಬೆಂಕಿ: ಬಿಜೆಪಿಯಲ್ಲಿ ಬಂಡಾಯದ ಕಿಡಿ
ಸಂಡೂರು ಉಪಚುನಾವಣೆ ಸೋಲಿನ ಹೊಣೆ ಶ್ರೀರಾಮುಲು ಅವರದ್ದು ಎಂಬ ಅಗರ್ವಾಲ್ ಹೇಳಿಕೆ ಬಿಜೆಪಿಯಲ್ಲಿ ಬಂಡಾಯಕ್ಕೆ ಕಾರಣವಾಗಿದೆ. ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತು ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಖರ್ಗೆ, ಪರಮೇಶ್ವರ್, ಡಿಕೆಶಿ ಮತ್ತು ವಿಶ್ವನಾಥ್ ನಡುವೆ ಪೈಪೋಟಿ ನಡೆಯುತ್ತಿದೆ.
ಬೆಂಗಳೂರು : ಬಡಿದಾಟಕ್ಕೆ ಬ್ರೇಕ್ ಹಾಕಬೇಕಿದ್ದ ಉಸ್ತುವಾರಿ ವಿರುದ್ಧವೇ ಬಂಡಾಯ ಶುರುವಾಗಿದೆ. ಸಂಡೂರು ಸೋಲಿನ ಹೆಸರಲ್ಲಿ ಅಗರವಾಲ್- ರಾಮುಲು ಜಟಾಪಟಿ ನಡೆದಿದೆ. ರೆಡ್ಡಿ ಮಾತು ಕೇಳಿದರೆ ಪಕ್ಷ ಬಿಡಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.
ಬಳ್ಳಾರಿಯ ಸಂಡೂರು ಉಪಚುನಾವಣೆಯ ಸೋಲಿಗೆ ಶ್ರೀರಾಮುಲು ಅವರೇ ಕಾರಣ ಎಂದು ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಇನ್ನೊಂದೆಡೆ ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತು ರಣತಂತ್ರ ರೂಪಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ಮಾತನಾಡುವ ವೇಳೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಸೋಲಿಗೆ ಶ್ರೀರಾಮುಲು ಅವರೇ ಕಾರಣವೆಂದು ನೇರವಾಗಿ ಆರೋಪಿಸಿ, ನೀವು “ಅಸಮರ್ಥ’ ಎಂದು ಅಗರ್ವಾಲ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ಶ್ರೀರಾಮುಲು ಅಗರ್ವಾಲ್ ವಿರುದ್ಧ ರೋಷಾವೇಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಶ್ರೀರಾಮುಲು ಸಭೆಯಲ್ಲೇ ಪ್ರತ್ಯುತ್ತರ ನೀಡಿ ಈ ರೀತಿಯ ಆರೋಪ ಮಾಡಬೇಡಿ, ಯಾರ ಮಾತು ಕೇಳಿ ಆರೋಪ ಮಾಡುತ್ತಿದ್ದೀರಿ, ನನ್ನ 30 ವರ್ಷದ ರಾಜಕಾರಣದಲ್ಲಿ ಆ ರೀತಿಯ ರಾಜಕೀಯ ಮಾಡಿಲ್ಲ. ಪಕ್ಷ ಎಲ್ಲಿ ನಿಲ್ಲಬೇಕು ಅಂದಿದೆಯೋ ಅಲ್ಲಿ ನಿಂತಿದ್ದೇನೆ. ಈ ಮೊದಲು ಅಮಿತ್ ಶಾ, ಯಡಿಯೂರಪ್ಪ ಅವರು ಡಿಸಿಎಂ ಮಾಡುತ್ತೀವಿ ಅಂದ್ರು ಮಾಡಿಲ್ಲ ಆದರೂ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ ಆದರೂ ಇಷ್ಟೆಲ್ಲ ಆರೋಪ ಮಾಡಿರುವುದು ಬೇಸರ ಆಗಿದೆ ಎಂದು ಉಸ್ತುವಾರಿ ಅಗರ್ವಾಲ್‌ಗೆ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ತಬ್ಬಿಬ್ಬಾದ ಅಗರ್ವಾಲ್ ಅವರು ಶ್ರೀರಾಮುಲುವನ್ನು ಸಮಾಧಾನ ಪಡಿಸಲು ಮುಂದಾದರು. ರಾಜ್ಯ ಉಸ್ತುವಾರಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಸಂಡೂರು ಉಪಚುನಾವಣೆ ಸೋಲಿನ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದೆ. ನಾನು ಇನ್ನೂ ವರದಿ ಕೊಟ್ಟಿಲ್ಲ. ನಿಮ್ಮ ವಿರುದ್ಧ ಕೆಲ ಆರೋಪ ಬಂದಿದೆ, ಇದಕ್ಕೆ ದಾಖಲೆ ನೀಡಿ ಎಂದು ಶ್ರೀರಾಮುಲು ಬಳಿ ಕೇಳಿದ್ದೇನೆ. ಆದರೆ ನೀವು ಏಕಾಏಕಿ ಈ ರೀತಿ ಆರೋಪ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜಕೀಯವಾಗಿ ಮುಗಿಸಲು ಯತ್ನ: ಪಕ್ಷ ತ್ಯಾಗದ ಮಾತನಾಡಿದ ಶ್ರೀರಾಮುಲು ಅವರನ್ನು ಬೊಮ್ಮಾಯಿ, ಡಾ| ಸಿ.ಎನ್. ಅಶ್ವತ್ಥನಾರಾಯಣ ಮೊದಲಾದವರು ಸಮಾಧಾನಪಡಿಸಲು ಮುಂದಾದರು. ಆ ಕ್ಷಣವೇ ಮಾಧ್ಯಮದ ಎದುರು ರಾಜೀನಾಮೆ ನೀಡುತ್ತೇನೆ ಎಂದು ಹಠ ಹಿಡಿದ ರಾಮುಲುಗೆ ಅಗರ್ವಾಲ್ ಅವರೇ ಕೊನೆಗೆ ಸಮಾಧಾನದ ಮಾತನಾಡಿ, “ಬೇಕಿದ್ದರೆ ನನ್ನ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ’ ಎಂದರು. ಈ ಮಧ್ಯೆ ಬುಧವಾರವೂ ತಮ್ಮ ಆಕ್ರೋಶ ಮುಂದುವರಿಸಿದ ಶ್ರೀರಾಮುಲು, “ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಯಾರದ್ದೋ ಮಾತು ಕೇಳಿ ನನ್ನ ಮೇಲೆ ಗೂಬೆಕೂರಿಸಬೇಡಿ. ಪಕ್ಷ ಬಿಡುತ್ತೇನೆ, ಬಿಡ್ರಿ’ ಎಂದು ಹೇಳಿದ್ದಾರೆ.
ಉಸ್ತುವಾರಿ ಅಗರ್ವಾಲ್‌ಗೆ ತರಾಟೆ ಇದಾದ ಬಳಿಕ ರಾಧಾಮೋಹನ್ ದಾಸ್ ಅಗರ್ವಾಲ್‌ಗೆ ಕೋರ್ ಕಮಿಟಿಯ ಹಿರಿಯ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಅಪರೂಪಕ್ಕೊಮ್ಮೆ ರಾಜ್ಯಕ್ಕೆ ಬಂದು ಮನಸ್ಸಿಗೆ ಬಂದಂತೆ ಸಭೆ ಮಾಡುತ್ತೀರಿ. ಇಲ್ಲಿಯ ವಸ್ತುಸ್ಥಿತಿ ನಿಮಗೆ ಗೊತ್ತಿದೆಯಾ? ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರನ್ನು ಮನಸ್ಸಿಗೆ ಬಂದಂತೆ ನೇಮಕ ಮಾಡಿಕೊಂಡಿದ್ದೀರಿ. ರಾಷ್ಟ್ರೀಯ ಮಾನದಂಡದ ಪ್ರಕಾರ 45-60 ವರ್ಷದೊಳಗಿನವರನ್ನು ಆಯ್ಕೆ ಮಾಡಬೇಕು. ಎಷ್ಟು ಕಡೆ ಈ ನಿಯಮ ಪಾಲಿಸಿದ್ದೀರಿ? ಇದನ್ನೆಲ್ಲ ನೀವು ಗಮನಿಸಿಲ್ಲವೇ ಎಂದು ಪ್ರಶ್ನಿಸಿದರು. ವಿಜಯೇಂದ್ರ ಕಾರ್ಯಶೈಲಿ ಬಗ್ಗೆ ಅವರ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಲಾಯಿತು. ಆಗ ಕೋರ್ ಕಮಿಟಿ ಸದಸ್ಯರೇ ಜಿಲ್ಲಾಧ್ಯಕ್ಷರ ಆಯ್ಕೆಗೆ ಹೆಸರು ಸೂಚಿಸಲಿ. ಎಲ್ಲರೂ ಸರಿಮಾಡಿಕೊಂಡು ಹೋಗೋಣ ಎಂದು ವಿಜಯೇಂದ್ರ ಪರಿಸ್ಥಿತಿ ಸರಿಮಾಡಲು ಪ್ರಯತ್ನಿಸಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ಶ್ರೀರಾಮುಲು ಕಿಡಿ :ಉಸ್ತುವಾರಿ ಅಗರ್‌ವಾಲ್ ಇಷ್ಟೆಲ್ಲಾ ಆರೋಪಿಸಿದರೂ ಕೂಡ ಬೆಂಬಲಕ್ಕೆ ನಿಲ್ಲದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಯ ಬಗ್ಗೆಯೂ ಶ್ರೀರಾಮುಲು ಕಿಡಿಕಾರಿದ್ದಾರೆ. ನನ್ನ ವಿರುದ್ಧ ಈ ರೀತಿ ಆರೋಪ ಮಾಡುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಿ ಎಂದರೆ ಏನರ್ಥ? ನಿಮ್ಮ ಸಮ್ಮತಿ ಇದೆಯೆಂದಲ್ಲವೇ? ಆ ಜನಾರ್ದನ ರೆಡ್ಡಿಯ ಮಾತು ಕೇಳಿಕೊಂಡು ನೀವು ನನ್ನ ವಿರುದ್ಧ ಆರೋಪ ಮಾಡುತ್ತಿದ್ದೀರಿ. ವಿಜಯೇಂದ್ರ, ರೆಡ್ಡಿ ಸೇರಿ ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರಗಳೆಲ್ಲವೂ ಗೊತ್ತು. ಬೇಕಿದ್ದರೆ ಹೇಳಿ, ಈಗಲೇ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಎದ್ದು ಬಾಗಿಲ ಬಳಿಗೆ ತೆರಳಿದರು ಎನ್ನಲಾಗಿದೆ.
ಜನಾರ್ದನ ರೆಡ್ಡಿಯಿಂದ ಉಸ್ತುವಾರಿಗೆ ಚಾಡಿ
ಬುಧವಾರ ಮಾಧ್ಯಮಗಳಲ್ಲಿ ಮಾತನಾಡಿ ಒಂದು ಕಾಲದ ತಮ್ಮ ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ವಿರುದ್ಧವೇ ಮಾಜಿ ಸಚಿವ ಬಿ. ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿಯವರ ಮಾತು ಕೇಳಿ ರಾಜ್ಯ ಉಸ್ತುವಾರಿ ಅಗರವಾಲ್ ನನ್ನ ಬಗ್ಗೆ ಲಘುವಾಗಿ ಮಾತನಾಡಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಂಡೂರು ಕ್ಷೇತ್ರದ ಉಪಚುನಾವಣೆ ಸೋಲಿನ ಕುರಿತ ವರದಿಯ ಸದಾನಂದ ಗೌಡ ಸಮಿತಿ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಸಭೆಯಲ್ಲೇ ಪ್ರಶ್ನಿಸಿದ್ದೇನೆ ಎಂದು ಹೇಳಿದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ತಂತ್ರ: ಇತ್ತೀಚೆಗೆ ಜನಾರ್ದನ ರೆಡ್ಡಿಯವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂಬ ಭಾವನೆ ಇದೆ. ರೆಡ್ಡಿಯವರು ಬಳ್ಳಾರಿಗೆ ಬಂದ ಮೇಲೆ ನನ್ನ ವಿರುದ್ಧ ಇದ್ದವರ ಗುಂಪು ಮಾಡಿಕೊಂಡಿದ್ದಾರೆ. ಉದಾಹರಣೆಗೆ ಬಂಗಾರು ಹನುಮಂತು ಮುಂತಾದವರ ಗುಂಪು ಕಟ್ಟಿಕೊಂಡು ನನ್ನ ಬಗ್ಗೆ ಬೆಂಗಳೂರು, ದಿಲ್ಲಿವರೆಗೂ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ನಾನು ಜನಾರ್ದನ ರೆಡ್ಡಿ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಅವರು ಪಾರ್ಟಿಗೆ ಮತ್ತೆ ಬರುತ್ತೇನೆ ಎಂದಾಗ, ಅವರನ್ನು ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ಧವೇ ಕಿಡಿಕಾರಿದ್ದಾರೆ.
ರೆಡ್ಡಿ-ನಾನು ಕ್ಯಾಮರಾ ಎದುರಷ್ಟೇ ಮಾತಾಡ್ತೀವಿ: ಇತ್ತೀಚೆಗೆ ನನ್ನ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅವರೂ ಈಗ ಶಾಸಕರಾಗಿದ್ದಾರೆ. ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ ಅವರಲ್ಲಿ ಅಧಿಕಾರ ಇದೆ ನನ್ನಲ್ಲಿ ಇಲ್ಲ. ಅವರಿಗೆ ಈ ರೆಡ್ಡಿ ಇದ್ದರೇ ಮಾತ್ರ ರಾಮುಲು ಚುನಾವಣೆ ಗೆಲ್ತಾನೆ ಎನ್ನುವ ವಿಚಾರ ಅವರಲ್ಲಿ ಇರಬಹುದು ಎಂದು ಹೇಳಿದರು. ಜನಾರ್ದನ ರೆಡ್ಡಿಯವರು ನಾವು ಕ್ಯಾಮರಾ ಎದುರಷ್ಟೇ ಮಾತಾಡುತ್ತೀವಿ ಮತ್ತೆ ರೆಡ್ಡಿಯವರು ಅವರ ಪಾಡಿಗೆ ಇರುತ್ತಾರೆ, ನಾವು ನಮ್ಮ ಪಾಡಿಗೆ ಇರುತ್ತೇವೆ ಎಂದು ಶ್ರೀ ರಾಮುಲು ಹೇಳಿದರು.