ಸನ್ಯಾನ ದೀಕ್ಷೆ ಸ್ವೀಕರಿಸಲಿರುವ ಯುವತಿಗೆ ಗೌರವ ಸನ್ಮಾನ
ಫ್ರೆಂಚ್ ಭಾಷೆಯ ಶಿಕ್ಷಕಿಯಾಗಿದ್ದ ಯುವತಿ ನಿಧಿ ಸನ್ಯಾಸಿಯಾಗಲಿದ್ದಾರೆ
ಸನ್ಮಾರ್ಗದ ಬದುಕಿಗೆ ಸನ್ಯಾಸ ದೀಕ್ಷೆ ಸಹಕಾರಿ: ನಿಧಿ
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ:
ಪ್ರತಿಯೊಂದು ಜೀವಿಯೂ ಪರಮಾತ್ಮನಾಗಬಹುದು ಎಂಬುದನ್ನು ಸಮಾಜಕ್ಕೆ ತೋರ್ಪಡಿಸಿದ ಜೈನ ಸಮುದಾಯದ ಸನ್ಯಾಸ ದೀಕ್ಷೆ ಜಾತಿ, ಮತ, ಭೇದ-ಭಾವಗಳ ಎಲ್ಲೆಗಳನ್ನು ಮೀರಿ ಮನುಷ್ಯನಲ್ಲಿ ಏಕತೆ ಸಾರುವುದಾಗಿದೆ. ಈ ನಿಟ್ಟಿನಲ್ಲಿ ಜೈನ್ ಧರ್ಮದಲ್ಲಿ ದೀಕ್ಷೆ ಸನ್ಮಾರ್ಗದ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ಸನ್ಯಾನ ದೀಕ್ಷೆ ಸ್ವೀಕರಿಸಲಿರುವ ನಿಧಿ ಹೇಳಿದರು.
ಪಟ್ಟಣದ ರಿಕಬ್ ಚಂದ್ ಬಾಗಮಾರ ಅವರ ನಿವಾಸ ಆವರಣದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಜಗತ್ತಿನಲ್ಲಿ ಎಲ್ಲ ಜೀವಿಗಳ ಒಂದು ಆತ್ಮಚೈತನ್ಯವಿದೆ. ಅದು ಎಲ್ಲರಿಗೂ ಸಮಾನವಾಗಿದೆ. ಆದರೆ ಪ್ರತಿಯೊಂದು ಜೀವಿಯೂ ತನಗೆ ದೊರೆತ ಜನ್ಮಾವಕಾಶದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಪರಿಣಾಮದಿಂದ ಗಳಿಸಿದ ಪಾಪ-ಪುಣ್ಯಗಳ ಅಂಟುವಿಕೆಯಿಂದಾಗಿ ಅಸಮಾನ ಸ್ಥಿತಿ-ಗತಿಯಲ್ಲಿ ಲೋಕ ಗೋಚರವಾಗುತ್ತಿದೆ. ಈ ಅಂಟಿದ ಕರ್ಮವನ್ನು ಸ್ವಪ್ರಯತ್ನ ಹಾಗೂ ಸಾಧನೆಗಳಿಂದ ನಾಶ ಮಾಡಿದಾಗ ಜೀವಿಯ ಒಳಗಿರುವ ಆತ್ಮವೇ ಪೂರ್ಣ ಪರಿಶುದ್ಧನಾಗಿ
ಪರಿಮಾತ್ಮನಾಗುತ್ತಾನೆ. ಅದು ಕರ್ಮರಹಿತನಾದ ಆತ್ಮನಿಗೆ ಸಹಜವಾಗಿ ಒಲಿಯುವ ಪದವಿ ಅದೇ
ಮೋಕ್ಷವಾಗಿದೆ.
ನನ್ನ ಕುಟುಂಬ ಎಲ್ಲವನ್ನೂ ನೀಡಿದೆ. ಮುಂಬೈನ ಪ್ರತಿಷ್ಟಿತ ಶಿಕ್ಷಣ ಕೇಂದ್ರವೊಂದರಲ್ಲಿ ಫ್ರೆಂಚ್ ಭಾಷೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಬಾಗಮಾರ ಪರಿವಾರದಿಂದ ಸಂಸ್ಕಾರ ದೊರೆತಿದೆ. ಹೀಗಾಗಿ ನನ್ನ ಕುಟುಂಬಕ್ಕೆ ಆಭಾರಿಯಾಗಿದ್ದೇನೆ. ಮಹಾವೀರ ಅವರ ಸಂದೇಶವನ್ನು ಸಾರುವ ಮಹತ್ತರ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಲೌಕಿಕ ಜೀವನದಿಂದ
ಸನ್ಯಾಸತ್ವದ ಕಡೆಗೆ ಆಸಕ್ತಿ ಹೆಚ್ಚಾಗಿ, ಆ ದಿಸೆಯಲ್ಲಿ
ಧರ್ಮ ಗುರುಗಳ ಮಾರ್ಗದರ್ಶನದಿಂದ ಜೈನ್ ಧರ್ಮ ಗ್ರಂಥ ‘ಅಧ್ಯಯನ ಮಾಡಿ ಈಗ ಸ್ವಯಂ ಪ್ರೇರಣೆಯಿಂದ ಜೈನ್ ಸನ್ಯಾಸ ದೀಕ್ಷೆ ಪಡೆಯಲು ಮುಂದಾಗಿದ್ದೇನೆ. ಫೆ. 7ರಂದು ಮಹಾರಾಷ್ಟ್ರದ ಧೋಳೆ ಜಿಲ್ಲೆಯಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದೇನೆ ಎಂದರು.
ಮಹಾವೀರ ಜೈನ್ ಸಮಾಜದ ಅಜೀತಕುಮಾರ ಬಾಗಮಾರ ಮಾತನಾಡಿದರು.
ಇದೇ ಸಂದರ್ಭದಲ್ಲಿಜೈನ್ ಸನ್ಯಾನ ದೀಕ್ಷೆ ಸ್ವೀಕರಿಸಲಿರುವ ನಿಧಿ ಅವರನ್ನು ಬಾಗಮಾರ ಪರಿವಾರದಿಂದ ಸನ್ಮಾನಿಸಿ, ಅಭಿನಂದಿಸಲಾಯಿತು. ರಿಕಬ್ ಚಂದ್ ಬಾಗಮಾರ, ಶೀತಲ ಬಾಗಮಾರ, ದೀಪಚಂದ್ ಬಾಗಮಾರ, ವಿಜಯಕುಮಾರ ಬಾಗಮಾರ, ಪ್ರಕಾಶ ಬಾಗಮಾರ, ವರ್ಧಮಾನ ಬಾಗಮಾರ, ಅರಿಹಂತ ಬಾಗಮಾರ, ಆನಂದ ಮಂತ್ರಿ ಅಜೀತ ಬಾಗಮಾರ, ಡಾ| ಬಿ.ವಿ. ಕಂಬಳ್ಳಾಳ ಸೇರಿದಂತೆ ಇನ್ನಿತರರು ಇದ್ದರು.