
ಗಾಯಕ ಸೋನು ನಿಗಮ ದುರಹಂಕಾರದ ವರ್ತನೆ; ಕ್ರಾಂತಿಸೂರ್ಯ ಜೈಭೀಮ್ ಸೇನೆ ಖಂಡನೆ
ಗಾಯಕ ಸೋನು ನಿಗಮ ದುರಹಂಕಾರದ ವರ್ತನೆ; ಕ್ರಾಂತಿಸೂರ್ಯ ಜೈಭೀಮ್ ಸೇನೆ ಖಂಡನೆ
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಯುವ ಅಭಿಮಾನಿಯೊಬ್ಬ ಕನ್ನಡ ಹಾಡು ಹಾಡಲು ಹಿಂದಿ ಭಾಷೆಯ ಖ್ಯಾತ ಹಾಡುಗಾರ ಸೋನು ನಿಗಮ್’ರಿಗೆ ಕನ್ನಡ ಎಂದು ಕೂಗಿ ಹೇಳಿದ್ದಕ್ಕೆ ಸೋನು ನಿಗಮ್ ನಡೆದುಕೊಂಡ ರೀತಿ ಅತ್ಯಂತ ದುರಹಂಕಾರದ್ದು ಮತ್ತು ಪೂರ್ವಾಗ್ರಹ ಪೀಡಿತವಾದದ್ದೂ ಆಗಿದ್ದು, ದುರಹಂಕಾರದ ವರ್ತನೆ ಖಂಡನೀಯ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯಾಧ್ಯಕ್ಷರಾದ ಮಂಜುನಾಥ ರಾಠೋಡ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗಾಯಕ ಸೋನು ನಿಗಮ ಅಂದು,
ಆ ಕ್ಷಣದಲ್ಲಿ ಅವರು ಅತ್ಯಂತ ಸಂವೇದನಾಶೂನ್ಯತೆಯಿಂದ ವರ್ತಿಸಿದ್ದಾರೆ ಮತ್ತು ಅದನ್ನು ಅದಕ್ಕೆ ಯಾವ ರೀತಿಯಲ್ಲಿಯೂ ಸಂಬಂಧ ಇಲ್ಲದ ಪಹಲ್ಗಾಮ್ ಕಗ್ಗೊಲೆಯ ಭಯೋತ್ಪಾದಕ ಕೃತ್ಯಕ್ಕೆ ತಳುಕು ಹಾಕಿದ್ದಾರೆ. ಒಬ್ಬ ಕಲಾವಿದನಿಗೆ ಮಾತ್ರವಲ್ಲ, ಕನಿಷ್ಠ ನಾಗರಿಕ ಪ್ರಜ್ಞೆ ಇರುವ ದೇಶದ ಯಾವ ನಾಗರಿಕನಿಗೂ ಇದು ತಕ್ಕುದಾದ ನಡವಳಿಕೆ ಅಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಕನಿಷ್ಠ ಸ್ವಾಭಿಮಾನ ಮತ್ತು ಹೆಮ್ಮೆಯ ನಡವಳಿಕೆಯನ್ನು ಕನ್ನಡಿಗರು ಭಾಷಾ ದುರಭಿಮಾನಿಗಳು ಮತ್ತು ಅಸಹಿಷ್ಣುಗಳು ಎಂದು ಪ್ರಚುರಪಡಿಸಲು ಬೆಂಗಳೂರಿನಲ್ಲಿರುವ ಅನ್ಯಭಾಷಿಕರು, ಅದರಲ್ಲಿಯೂ ಉತ್ತರ ಭಾರತದ ಹಿಂದಿ ಮತ್ತಿತರ ಭಾಷಿಕರು ಬಳಸುತ್ತಿದ್ದಾರೆ. ಇದು ಖಂಡನೀಯ. ಅತ್ಯಂತ ಬೇಜವಾಬ್ದಾರಿ ನಡವಳಿಕೆಯ ಮತ್ತು TRP ಬೆನ್ನಿಗೆ ಬಿದ್ದಿರುವ ಲಜ್ಜೆಗೇಡಿ ಮಾಧ್ಯಮಗಳು ಆಗಾಗ ಇಂತಹ ಕೃತಕ ಚಂಡಮಾರುತ ಸೃಷ್ಟಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಇದಕ್ಕೆ ಬಹುಶಃ ಉತ್ತರ ಭಾರತದ ಕಲಾವಿದರೂ ಬಲಿಯಾಗಿರುವುದು ಶೋಚನೀಯ.
ಬೆಂಗಳೂರಿನಲ್ಲಿ ನಡೆದ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರೊಬ್ಬರು “ಕನ್ನಡ” ಎಂದು ಹೇಳಿದಾಕ್ಷಣ ಸಿಟ್ಟಿಗೆದ್ದ ಸೋನು ನಿಗಮ್ ಈ ತರಹದ ಎಲ್ಲಾ ಸಂವೇದನಾಶೂನ್ಯ ದುರಹಂಕಾರಿಗಳ ಸಾಂಕೇತಿಕ ಪ್ರತಿನಿಧಿ. ಈ ಕೂಡಲೇ ಅವರು ಕನ್ನಡಿಗರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರು ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ನೀಡಲು ಅಥವ ಕನ್ನಡ ಸಿನಿಮಾಗಳಲ್ಲಿ ಹಾಡಲು ಅವಕಾಶ ಇಲ್ಲವಾಗುವ ಸಂದರ್ಭ ಸೃಷ್ಟಿಯಾಗುತ್ತದೆ. ಈಗಾಗಲೇ ಅನೇಕ ಕನ್ನಡಿಗರು ಅವರಿಗೆ ಕೊಟ್ಟಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಅವರ ತಪ್ಪನ್ನು ಮನಗಂಡು ಪ್ರಾಮಾಣಿಕವಾಗಿ ಕ್ಷಮೆ ಕೇಳಬೇಕೆಂದು ಕ್ರಾಂತಿಸೂರ್ಯ ಜೈಭೀಮ್ ಸೇನೆ ಒತ್ತಾಯಿಸುತ್ತದೆ ಎಂದು ಆಗ್ರಹಿಸಿದ್ದಾರೆ.
ಈ ನಿಟ್ಟಿನಲ್ಲಿ ಕ್ರಾಂತಿಸೂರ್ಯ ಜೈಭೀಮ್ ಸೇನೆ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲಿದೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಸೋನು ನಿಗಮ್’ರ ಕರ್ನಾಟಕದಾದ್ಯಂತ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ಸಹ ಹೋರಾಟ ಮಾಡಲಿದೆ.
ಇದು ಕೇವಲ ಸೋನು ನಿಗಮ್’ರಿಗೆ ಮಾತ್ರವಲ್ಲ, ಭಾರತ ದೇಶದ ಇತಿಹಾಸ ಮತ್ತು ವೈವಿಧ್ಯತೆಯ ಅರಿವಿಲ್ಲದ, ತಮ್ಮ ಕ್ಷೇತ್ರದಲ್ಲಿ ಏನೋ ಸಾಧನೆ ಮಾಡಿದ ಮಾತ್ರಕ್ಕೆ ನಮಗೆ ಎಲ್ಲವೂ ಗೊತ್ತು ಮತ್ತು ನಾವು ಏನು ಆಡಿದರೂ ನಡೆಯುತ್ತದೆ ಎನ್ನುವ ಅಜ್ಞಾನಿ, ಅರೆಜ್ಞಾನಿ ಮತ್ತು ಅಹಂಕಾರಿ ಪ್ರಭೃತಿಗಳೂ ಎಚ್ಚರದಿಂದ ಕನ್ನಡಿಗರೂ ಸೇರಿದಂತೆ ದೇಶದ ಎಲ್ಲಾ ಹಿಂದಿಯೇತರ ಭಾಷಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವರ್ತಿಸುವಂತೆ ಮಾಡುವ ಪಾಠವಾಗಬೇಕಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***