ಬಂಜಾರರ ವಾಜಾದಲ್ಲಿ ಸಾಂಸ್ಕೃತಿಕ ಹಿನ್ನಲೆ ಅಡಗಿದೆ
ಬಂಜಾರ ಭಜನಾ ಸಂಘಕ್ಕೆ ವಾದ್ಯ ಸಾಮಗ್ರಿಗಳ ಕೊಡುಗೆ
ಗಜೇಂದ್ರಗಡ:
ಬಂಜಾರ(ಲಂಬಾಣಿ) ಭಾಷೆಯಲ್ಲಿ ಹಾಡುವ ವಾಜಾ (ಭಜನಾ) ಪದಗಳಲ್ಲಿ ಸಾಂಸ್ಕೃತಿಕ ಹಿನ್ನೆಲೆ ಅಡಗಿದೆ. ಅಲ್ಲಿನ ಪ್ರತಿ ನುಡಿಯಲ್ಲೂ ಸಮುದಾಯದ ಆಚಾರ, ವಿಚಾರ, ಧರ್ಮದ ಕುರಿತು ಹೇಳಲಾಗುತ್ತದೆ ಎಂದು ಸೇವಾ ಬಂಜಾರ ಭಜನಾ ಸಂಘದ ಅಧ್ಯಕ್ಷ ಧನರಾಜ ರಾಠೋಡ ಹೇಳಿದರು.
ಗಜೇಂದ್ರಗಡ ನಗರದ ಸೇವಾಲಾಲ್ ನಗರದ ಲಂಬಾಣಿ ತಾಂಡಾದಲ್ಲಿ ಉಮೇಶ ಲಕ್ಷ್ಮಣ ರಾಠೋಡ ಅವರು ಬಂಜಾರ ಜನಾಂಗದಲ್ಲಿ ಬಳಕೆ ಮಾಡುವ ವಾಜಾ ವಾದ್ಯ ಸಾಮಗ್ರಿಗಳನ್ನು (ಭಜನಾ ಸಾಮಗ್ರಿಗಳನ್ನು) ಕೊಡುಗೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಜಾರ ಸಂಸ್ಕೃತಿ ಉಳಿಯಬೇಕು ಹಾಗೂ ಈಗಿನ ಯುವ ಪೀಳಿಗೆಗೆ ತಿಳಿಯಬೇಕು ಎಂದರೆ ವಾಜಾ ಉಳಿಯಬೇಕು. ಆಧುನಿಕ ಯುಗದಲ್ಲಿ ಮುಳಗಿರುವ ಯುವ ಜನಾಂಗ ವಾಜಾ ಪದಗಳನ್ನು ಕಲಿಯಲು ಆಸಕ್ತಿ ತೋರುತ್ತಿಲ್ಲ. ಆದರೆ ವಾಜಾದಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಾಂಸ್ಕೃತಿ ಮಾಹಿತಿ ದೊರೆಯುತ್ತದೆ ಎಂದರು. ಈಗಲೂ ತಾಂಡಾಗಳಲ್ಲಿ ಜವಳ, ದಸರಾ, ಗುಡಿ ಕಾರ್ಯಕ್ರಮ, ಶುಭ ಸಮಾರಂಭಗಳಲ್ಲಿ ವಾಜಾ ಕಾರ್ಯಕ್ರಮ ನಡೆಯುತ್ತದೆ. ಆದ್ದರಿಂದ ವಾಜಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲು ಮುಂದಾದರೆ ಬಂಜಾರ ಸಂಸ್ಕೃತಿಗೆ ನೀಡಿದ ಉತ್ತಮ ಕೊಡುಗೆಯಾಗುತ್ತದೆ ಎಂದರು.
ದಾನಿ ಉಮೇಶ ಲಕ್ಷ್ಮಣ ರಾಠೋಡ ಮಾತನಾಡಿ, ನಮ್ಮ ತಂದೆಯು ಒಬ್ಬ ಉತ್ತಮ ವಾಜಾ (ಭಜನಾ) ಹಾಡುಗಳನ್ನು ಹಾಡುವ ವ್ಯಕ್ತಿಯಾಗಿದ್ದರು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೆಸರು ಮಾಡಿದ್ದರು. ಅವರ ನೆನಪಿಗಾಗಿ ನನ್ನ ಪುಟ್ಟ ಮಗುವಿನ ಜನ್ಮ ದಿನದ ಉತ್ತಮ ರೀತಿಯ ಆಚರಣೆಯ ಅಂಗವಾಗಿ ನಮ್ಮ ತಾಂಡಾದ ಸೇವಾ ಭಜನಾ ಸಂಘಕ್ಕೆ ವಾದ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ವಾಜಾ ಹಾಡುಗಾರ್ತಿ ಲಾಲವ್ವ ಚಂದಪ್ಪ ಬಾನೋತ್ತರ ಮಾತನಾಡಿ, ನಮ್ಮ ಸಮುದಾಯದ ಕಲಿಗೆ ಅಗತ್ಯವಾಗಿರುವ ವಾದ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ಇದರಿಂದ ಧಾರ್ಮಿಕ ಮತ್ತ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಉಮೇಶ ಲಕ್ಷ್ಮಣ್ಣ ರಾಠೋಡ ಅವರ ಮನೆಯಲ್ಲಿ ವಾಜಾ ವಾದ್ಯ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ ವಾಜಾ ಪದ ಹಾಡುವ ಮೂಲಕ ಹಾಗೂ ದೇವರ ಸ್ಮರಣೆ ಮಾಡುವ ಮೂಲಕ ತಾಂಡಾದ ಗುಡಿಗೆ ತರಲಾಯಿತು. ನಂತರ ಹಿರಿಯ ಸಮಕ್ಷಮದಲ್ಲಿ ಅರ್ಪಿಸಲಾಯಿತು. ಈ ವೇಳೆ ದಾನಿ ಉಮೇಶ ಲಕ್ಷ್ಮಣ್ಣ ರಾಠೋಡ ಅವರನ್ನು ಸನ್ಮಾನಿಸಲಾಯಿತು.
ಶಂಕ್ರಪ್ಪ ರಾಮಪ್ಪ ರಾಠೋಡ, ದೇವಪ್ಪ ತುಕಪ್ಪ ಪೂಜಾರಿ, ಬಾಬಣ್ಣ ಶಂಕ್ರಪ್ಪ ಗುಗಲೋತ್ತರ, ಮೇಘಪ್ಪ ಸಕ್ರಪ್ಪ ಅಜ್ಮೀರ, ಭೋಜಪ್ಪ ಗೋವಿಂದಪ್ಪ ಮಾಳೋತ್ತರ, ದುರ್ಗಪ್ಪ ಮಾಳೋತ್ತರ, ಸೋಮಪ್ಪ ಮಾಳೋತ್ತರ, ವಾಸು ದುರಗಪ್ಪ ರಾಠೋಡ, ಪರಸಪ್ಪ ಮಾಳೋತ್ತರ, ಕುಬೇರಪ್ಪ ಮಾಳೋತ್ತರ ಇದ್ದರು.
ಚಿತ್ರ ಶಿರ್ಷಿಕೆ: ಗಜೇಂದ್ರಗಡ ನಗರದ ಲಂಬಾಣಿ ತಾಂಡಾದಲ್ಲಿ ಬಂಜಾರ ಜನಾಂಗದಲ್ಲಿ ಬಳಕೆ ಮಾಡುವ ವಾಜಾ ವಾದ್ಯಗಳನ್ನು (ಭಜನಾ ಸಾಮಗ್ರಿಗಳನ್ನು) ಕೊಡುಗೆ ನೀಡಿದ ಉಮೇಶ ಲಕ್ಷ್ಮಣ ರಾಠೋಡ ಅವರನ್ನು ಸನ್ಮಾನಿಸಲಾಯಿತು