ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
ವಿಪ್ ಉಲ್ಲಂಘಿಸಿದರೆ ಕ್ರಮ: ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ
ನರೇಗಲ್:
ಸ್ಥಳೀಯ ಪ.ಪಂ.ಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ. 2 ರಂದು ನಿಗದಿಯಾಗಿದೆ. ಆದರೆ ಬಿಜೆಪಿಯ ಆರು ಜನ ಸದಸ್ಯರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸೆ.1 ವರೆಗೂ ಸಂಪರ್ಕಕ್ಕೆ ಸಿಗದೆ ಇರುವ ಕಾರಣ ಭಾನುವಾರ ರಾತ್ರಿ ಬಿಜೆಪಿ ತನ್ನ ಆರು ಜನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.
ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ ಅವರ ನೇತೃತ್ವದಲ್ಲಿ 6ನೇ ವಾರ್ಡಿನ ಸದಸ್ಯೆ ವಿಜಯಲಕ್ಷ್ಮೀ ಚಲವಾದಿ, 12ನೇ ವಾರ್ಡಿನ ಸದಸ್ಯ ಮಲ್ಲಿಕಸಾಬ್ ರೋಣದ, 13ನೇ ವಾರ್ಡಿನ ಸದಸ್ಯ ಈರಪ್ಪ ಜೋಗಿ, 14ನೇ ವಾರ್ಡಿನ ಸದಸ್ಯ ಫಕೀರಪ್ಪ ಬಂಬ್ಲಾಪುರ, 15ನೇ ವಾರ್ಡಿನ ಸದಸ್ಯ ಫಕೀರಪ್ಪ ಮಳ್ಳಿ, 17ನೇ ವಾರ್ಡಿನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಅವರ ಮನೆ ಬಾಗಿಲಿಗೆ ವಿಪ್ ಪ್ರತಿಗಳನ್ನು ಅಂಟಿಸಲಾಯಿತು.
ಈ ವೇಳೆ ಮಾತನಾಡಿದ ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ, ಬಿಜೆಪಿ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪ.ಪಂ.ಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಗೆ ಹಾಜರಾಗದೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ 6 ಮಂದಿ ಪಟ್ಟಣ ಪಂಚಾಯ್ತಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ ಎಂದರು.
ಒಟ್ಟು 17 ಸದಸ್ಯ ಬಲದ ನರೇಗಲ್ ಪಟ್ಟಣ ಪಂಚಾಯ್ತಿಯಲ್ಲಿ 12 ಬಿಜೆಪಿ, 3 ಕಾಂಗ್ರೆಸ್, ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಒಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇದರಿಂದ ನಮ್ಮ ಬಿಜೆಪಿಗೆ 13 ಮಂದಿಯ ಸದಸ್ಯ ಬಲ ಹೊಂದಿದೆ. ಹೀಗಾಗಿ ನಮ್ಮ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಪಕ್ಷದ ಚಿಹ್ನೆಯ ಮೇಲೆ ಆರಿಸಿ ಬಂದಿರುವ ಎಲ್ಲಾ ಬಿಜೆಪಿ ಸದಸ್ಯರು, ಬಿಜೆಪಿ ವತಿಯಿಂದ ಸ್ಪರ್ಧಿಸುವವರಿಗೆ ಮತ ಚಲಾಯಿಸಬೇಕು. ತಪ್ಪಿದರೆ ಪಕ್ಷಾಂತರ ವಿರೋಧಿ ಕಾನೂನಿನಂತೆ ಚುನಾವಣೆಗೆ ನಿಲ್ಲದಂತೆ 5 ವರ್ಷಗಳ ಕಾಲ ಅನರ್ಹತೆ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಶಶಿಧರ ಸಂಕನಗೌಡ್ರ, ಶರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಕಣವಿ, ಬಸವರಾಜ ಕೊಟಗಿ, ಪ್ರಕಾಶ ಹಕ್ಕಿ ಇದ್ದರು.